ಯಾಣ
ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲ್ಲೂಕಿನ ಒಂದು ಯಾತ್ರಾಸ್ಥಳ. ಕುಮಟ ಮತ್ತು ಶಿರಸಿ ತಾಲ್ಲೂಕುಗಳ ಸರಹದ್ದಿನಲ್ಲಿ ಕುಮಟದಿಂದ 24 ಕಿಮೀ ದೂರದಲ್ಲಿದೆ. ಪ್ರಕೃತಿದೇವಿಯ ಮಡಿನಲ್ಲಿರುವ ಪ್ರಪಂಚದ ಅದ್ಭುತರಮ್ಯ ತಾಣಗಳಲ್ಲಿ ಒಂದು; ನಿಸರ್ಗ ಪ್ರೇಮಿಗಳ ಸ್ವರ್ಗ ಧಾಮ. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಈ ಸ್ಥಳದ ಸುತ್ತಲೂ ದುರ್ಗಮ ಪರ್ವತಾವಳಿಗಳಿವೆ. ವೃತ್ತಾಕಾರವಾಗಿರುವ ಯಾಣದ ಕಂದರ ಬಲು ಸುಂದರ. ಶಿರಸಿ ಕಡೆಯಿಂದ ಹೆಗಡೆಕಟ್ಟೆಯವರೆಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ 9.5 ಕಿಮೀ ಕಾಲುದಾರಿಯಿಂದ ನಡೆದು ಹೋಗಬೇಕು. ಕಾಲು ದಾರಿಯಿಂದ ಹೋಗುವ ಯಾತ್ರಿಕರು ಬೆಟ್ಟದಲ್ಲಿ ಏರು-ತಗ್ಗುಗಳ ನಿರ್ಜನ ಪ್ರದೇಶದಲ್ಲಿ ಸಾಗಬೇಕಾಗುವುದರಿಂದ ಗುಂಪುಕಟ್ಟಿಕೊಂಡು ಹೋಗುವರು. ಅದಕ್ಕಾಗಿಯೇ ಯಾಣದ ಬೆಟ್ಟ ಏರಲು ಮೈಯಲ್ಲಿ ನೆಣಬೇಕು. ಹಣವಿದ್ದವರಿಗೆ ಗೋಕರ್ಣ, ಸೊಕ್ಕಿದ್ದವರಿಗೆ ಯಾಣ ಎಂಬ ಗಾದೆ ಪ್ರಚಲಿತವಾಗಿದೆ. ಯಾಣದ ಪ್ರಾಚೀನ ಹೆಸರು ಹರಿತಕೀಪುರ.

	ದಟ್ಟ ಅರಣ್ಯದ ಮಧ್ಯೆ ಕೋಟೆಗೋಡೆಯಂತೆ ಸುಮಾರು 46 ಮೀ ಎತ್ತರವಿರುವ ಕೋಡುಗಲ್ಲು ಬಂಡೆಯ ಬೆಟ್ಟವಿದೆ. ಇಲ್ಲಿ ಸುಮಾರು 37 ಮೀ ಉದ್ದ, 3 ಮೀ ಅಗಲ, 3 ಮೀ ಎತ್ತರವಿರುವ ಭೈರವೇಶ್ವರ ಗುಹೆ ಇದೆ. ಈ ಭವ್ಯ ಆಕಾರದ ಶಿಲೆಗೆ ಶಿವನ ಜಡೆ ಎಂದೂ ಹೆಸರು. ಇದನ್ನು ಭೈರವನ ಪ್ರತೀಕ ಎನ್ನುತ್ತಾರೆ. ಈ ದೃಶ್ಯ ಅದ್ಭುತ. ಇಂಥ ಬಂಡೆಯ ಶಿಖರದಲ್ಲಿ ಜಲಸಂಚಯವಿದ್ದು, ಗವಿಯಲ್ಲಿರುವ ಭೈರವೇಶ್ವರಲಿಂಗದ ಮೇಲೆ ತಿಳಿನೀರು ತಾನಾಗಿ ಸತತ ಬೀಳುತ್ತಿರುವುದು ಗಮನಾರ್ಹ. ಈ ನೀರಿನಲ್ಲಿ ರೋಗನಿವಾರಕ ಶಕ್ತಿ ಇದೆ ಎಂಬ ಪವಿತ್ರ ನಂಬಿಕೆಯಿಂದ ನೀರನ್ನು ಸಂಗ್ರಹಿಸಿಕೊಂಡು ಹೋಗಿ ರೋಗಿಗಳಿಗೆ ಕೊಡುತ್ತಾರೆ.

	ಈ ಗವಿಯ ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿರುವ ಚಿಕ್ಕ ಗುಹೆಯಲ್ಲಿ ಸು. 3ಮೀ ಎತ್ತರವಿರುವ ಪಾರ್ವತಿದೇವಿಯ ವಿಗ್ರಹವಿದೆ. ಇದನ್ನು ಚಂಡಿಯಮ್ಮ ಎಂದೂ ಕರೆಯುವುದುಂಟು. ಕಲ್ಲುಬಂಡೆಗಳ ಮಧ್ಯೆ ಹರಿಯುವ ನೀರು ನಿರ್ಮಲವಾಗಿದ್ದು ಇದನ್ನು ಬೆಳ್ಳಿ ಝರಿ ಎನ್ನುವರು. ಈ ಝರಿ ಮುಂದೆ ಹರಿದು ಆನೆಗೊಂಡಿ ಎಂಬ ಹೆಸರಿನಿಂದ ಕುಮಟಕ್ಕೆ ಈಶಾನ್ಯದಲ್ಲಿ ಸು. 13 ಕಿಮೀ ದೂರದಲ್ಲಿ ಉಪ್ಪಿನಪಟ್ಟಣವೆಂಬಲ್ಲಿ ತದಡಿ (ಅಘನಾಶಿನಿ) ನದಿಯನ್ನು ಸೇರುವುದು. ಇದರ ಸಮೀಪ ಗಣಪತಿಯ ಚಿಕ್ಕ ದೇವಾಲಯವಿದೆ. ಪ್ರಥಮವಾಗಿ ಶ್ರೀಗಣಪತಿಯನ್ನು ಪೂಜಿಸಿಯೇ ಭೈರವೇಶ್ವರನ ದರ್ಶನಕ್ಕೆ ಹೋಗಬೇಕು. ಗುಡಿಯ ಮುಂದಿರುವ ಕೆರೆಯಲ್ಲಿ ಸ್ನಾನಮಾಡಿ ಪೂಜೆಗೆ ಹೊರಡುವರು. ಗಣಪತಿ ದೇವಾಲಯದಿಂದ ಬಂದ ಕೂಡಲೇ ಮುಂದೆ ಕಾಣುವ ಜಗನ್ಮೋಹಿನಿ ಶಿಖರ ಸುಮಾರು 48 ಮೀ ಎತ್ತರವಾಗಿ ಭವ್ಯವಾಗಿ ತೋರುವುದು. ಇದಕ್ಕೆ ದುರ್ಗಾ ಅಥವಾ ಚಂಡಿಕಾ ದೇವಾಲಯ ಎಂದೂ ಮೋಹಿನಿ ಮೂರ್ತಿ ಎಂದೂ ಹೇಳುತ್ತಾರೆ.

	ಯಾಣದ ಬಂಡೆಯ ಎತ್ತರಕ್ಕೂ ಮೇಲೆಲ್ಲ ನೂರಾರು ಹೆಜ್ಜೇನುಗಳ ಹುಟ್ಟುಗಳು ನೇತಾಡುತ್ತಿರುತ್ತವೆ. ಈ ಸ್ಥಳದಲ್ಲಿ ಯಾವುದೇ ರೀತಿಯಿಂದ ಮೈಲಿಗೆಯಾದರೆ ಆ ಜೇನುಗಳೆಲ್ಲ ಉರಿದೆದ್ದು ಯಾತ್ರಿಕರನ್ನು ಬಂದು ಕಡಿಯುತ್ತವೆ ಎಂಬ ನಂಬಿಕೆಯಿದೆ. ಯಾಣದ ಸುತ್ತಲಿನ ಮಣ್ಣೆಲ್ಲ ಕಪ್ಪಾಗಿದೆ. ಸಮೀಪದಲ್ಲಿ ಸುಣ್ಣದಕಲ್ಲಿನ ಮತ್ತು ಬೆಸಾಲ್ಟ್ ಕಲ್ಲಿನ ಅನೇಕ ಬಂಡೆಗಳಿವೆ. ಪೌರಾಣಿಕ ಕಥೆಯಂತೆ, ಮಹಾವಿಷ್ಣು ಮೋಹಿನಿಯಾಗಿ ಭಸ್ಮಾಸುರನನ್ನು ಭಸ್ಮ ಮಾಡಿದ ಈ ಸ್ಥಳದಲ್ಲಿ ಭಸ್ಮಾಸುರನ ಭಸ್ಮವೂ ಕೂಡಿದೆ ಎಂಬುದು ಸ್ಥಳೀಯ ನಂಬಿಕೆ. ಇಲ್ಲಿನ ಭೈರವೇಶ್ವರ ಶಿಖರ, ಮೋಹಿನಿ ಶಿಖರ, ಪಾರ್ವತಿ ದೇವಾಲಯ, ನಾರಾಯಣ ದೇವಾಲಯ-ಇವು ಭಸ್ಮಾಸುರ ಮೋಹಿನಿ ಪ್ರಕರಣದ ಕ್ಷೇತ್ರ ಎಂಬುದರ ಸಂಕೇತ ಆಗಿದೆ. ಇಲ್ಲಿ ಶಿವರಾತ್ರಿಯಲ್ಲಿ ಭೈರವೇಶ್ವರ ಜಾತ್ರೆಯಾಗುತ್ತದೆ. ಯಾಣದ ಸಮೀಪವೇ ಪೂಜಾರಿಯ ಮನೆ ಇದ್ದು ನಿತ್ಯ ಪೂಜೆ ನಡೆಯುತ್ತದೆ. ವಸತಿಗಾಗಿ ವಿಶಾಲವಾದ ಪಡಸಾಲೆಗಳಿವೆ.

	ಪೂರ್ವದಲ್ಲಿ ಈ ಕ್ಷೇತ್ರದ ಸಮೀಪ ನೆಲಸಿದ್ದ ಸನ್ಯಾಸಿ ಬರೆದ ಭೈರವ ಪುರಾಣ ಹಾಗೂ ಕೌಶಿಕ ರಾಮಾಯಣ ಎಂಬ ಗ್ರಂಥಗಳು ಈಗ ಲಭ್ಯವಿದೆ. ಈ ಗ್ರಂಥಕರ್ತ ತನ್ನ ಹೆಸರು ಬತ್ತಲೇಶ್ವರನೆಂದೂ ತಾನು ಭೈರವೇಶ್ವರನ ಪರಮಭಕ್ತನೆಂದೂ ತನ್ನ ಕೃತಿಯಲ್ಲಿ ನಿವೇದಿಸಿಕೊಂಡಿದ್ದಾನೆ. ಕೌಶಿಕ ರಾಮಾಯಣವನ್ನು ಶಿವರಾಮ ಕಾರಂತರು ಸಂಪಾದಿಸಿ ಪ್ರಕಟಿಸಿದ್ದಾರೆ.
	ಪ್ರಕೃತಿಯ ಭವ್ಯ ದರ್ಶನ ಪಡೆಯಲು ಹಾತೊರೆಯುವವರೆಲ್ಲರೂ ಯಾಣವನ್ನು ನೋಡಲೇಬೇಕು. ಯಾಣದ ವೀಕ್ಷಣೆಗೆ ಬೇಸಗೆ ಸಕಾಲ. ಕಾಲುನಡಿಗೆಯಲ್ಲಿ ಹೋಗುವ ಪ್ರವಾಸಿಗರಿಗೆ ಮಳೆಗಾಲದಲ್ಲಿ ಉಂಬಳಗಳ ಕಾಟವಿರುತ್ತದೆ. ಯಾಣದ ಈ ಸುಂದರ ಪರಿಸರದಲ್ಲಿ ಸಿಮೆಂಟ್ ಕಂಪನಿಯೊಂದನ್ನು ಸ್ಥಾಪಿಸುವ ಪ್ರಯತ್ನ ನಡೆದಿತ್ತು. ಆದರೆ ಪರಿಸರವಾದಿಗಳ ಹೋರಾಟದಿಂದಾಗಿ ಯಾಣ ಉಳಿದಿದೆ.     				   				
		 (ಆರ್.ಜಿ.ಆರ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ